ಕ್ರೇಮರ್, ಗೇಬ್ರಿಯಲ್
 1704-1752. ಸ್ವಿಟ್ಜರ್ಲೆಂಡಿನ ಗಣಿತಶಾಸ್ತ್ರಜ್ಞ. ಈತನ ಜನನ ಜಿನೀವದಲ್ಲಿ. ತಂದೆ ಜೀನ್ ಐಸಾಕ್ ಕ್ರೇಮರ್; ತಾಯಿ ಆನಿ ಮ್ಯಾಲೆಟ್. ಇವರ ಮೂರನೆಯ ಮಗನೇ ಗೇಬ್ರಿಯಲ್ ಕ್ರೇಮರ್ ಜೀನ್ ಐಸಾಕ್ ಕ್ರೇಮರ್ ಜೀವನೋಪಾಯಕ್ಕಾಗಿ ತನ್ನ ಕುಟುಂಬದವರೊಡನೆ ಹೋಲ್‍ಸ್ಟೈನಿನಿಂದ ಸ್ಟ್ರಾಸ್‍ಬರ್ಗಿಗೂ ಅನಂತರ ಅಲ್ಲಿಂದ ಜಿನೀವಕ್ಕೂ ಪ್ರಯಾಣ ಬೆಳೆಸಿದ. ಹಿರಿಯ ಮಗ ಜೀನ್ ಆಂಟೊಯ್ನಿ ತನ್ನ ತಂದೆಯೊಡನೆ ಸೇರಿ ಜಿನೀವದಲ್ಲಿ ವೈದ್ಯವೃತ್ತಿ ನಡೆಸಿದ. ಜೀನ್ ಕ್ರೇಮರ್ ನ್ಯಾಯಶಾಸ್ತ್ರದ ಪ್ರಾಧ್ಯಾಪಕನಾದ; ಗೇಬ್ರಿಯಲ್ ಕ್ರೇಮರ್ ಗಣಿತಶಾಸ್ತ್ರದ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾದ. ಒಟ್ಟಿನಲ್ಲಿ ಮೂರು ಗಂಡುಮಕ್ಕಳೂ ಸ್ಥಳೀಯ ಸರ್ಕಾರದ ವ್ಯವಹಾರಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಕ್ರೇಮರನ ಮೊದಲ ವಿದ್ಯಾಭ್ಯಾಸವೆಲ್ಲವೂ ಜಿನೀವದಲ್ಲೇ ನಡೆಯಿತು. ಹದಿನೆಂಟರ ಹರೆಯದಲ್ಲಿ ಶಬ್ದಶಾಸ್ತ್ರಕ್ಕೆ ಸಂಬಂಧಿಸಿದ ಪ್ರಬಂಧವೊಂದನ್ನು ಪ್ರಸಿದ್ಧಿಸಿದ. ಇಪ್ಪತ್ತರಲ್ಲಿ ಜಿನೀವದ ಕೆಲ್ವಿನ್ ಆಕಾಡೆಮಿಯಲ್ಲಿ ತತ್ತ್ವಶಾಸ್ತ್ರದ ಪೀಠಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ. ಆದರೆ ಸ್ಪರ್ಧಿಸಿದ ಮೂವರಲ್ಲಿ ಅತ್ಯಂತ ಹಿರಿಯನಾದ ಅಮೀಡೀದೆಲಾ ರೀವ್ ಎಂಬುವನಿಗೆ ಆ ಸ್ಥಾನ ದೊರಕಿತು. ಕ್ರೇಮರ್ ಮತ್ತು ಮತ್ತೊಬ್ಬ ಸ್ಪರ್ಧಿಯಾದ 21 ವರ್ಷದ ಜಿಯೊವಾನಿ ಲುಡೋವಿಕೋ ಕ್ಯಾಲಂಡ್ರಿನಿಯಂಥ ಯುವಕರಿಗೆ ಸ್ಥಾನಮಾನಗಳನ್ನು ಕಲ್ಪಿಸಬೇಕೆಂಬುದು ಅಕೆಡಮಿಯ ಪ್ರಾಜ್ಞರ ಅಭಿಮತವಾಗಿತ್ತು. ಇದನ್ನು ನೆರವೇರಿಸಲು ಆ ತತ್ತ್ವಶಾಸ್ತ್ರ ಪೀಠವನ್ನು ಎರಡು ವಿಭಾಗಗಳಾಗಿ ಮಾಡಿ ಇಬ್ಬರನ್ನೂ ಆಯಾ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಿದರು. ಸ್ಥಾನದ ಕರ್ತವ್ಯಗಳು ಹಾಗೂ ಅದರಿಂದ ಬರುವ ಸಂಭಾವನೆಯನ್ನು ಇಬ್ಬರೂ ಹಂಚಿಕೊಳ್ಳಲಿಕ್ಕೆ ಅಲ್ಲಿ ಅವಕಾಶವಿತ್ತಲ್ಲದೆ ಅವರು ಜ್ಞಾನಾರ್ಜನೆಗಾಗಿ ಎರಡು ಮೂರು ವರ್ಷಗಳ ಕಾಲ ಪ್ರವಾಸ ಮಾಡುವುದು ಸಹ ಸಾಧ್ಯವಿತ್ತು. ಒಬ್ಬನ ಪ್ರವಾಸ ಕಾಲದಲ್ಲಿ ಮತ್ತೊಬ್ಬ ಪ್ರವಾಸಿಯ ಕರ್ತವ್ಯಗಳನ್ನು ನಿರ್ವಹಿಸಿ ಆತನ ಸಂಭಾವನೆಯನ್ನೂ ಪಡೆಯುತ್ತಿದ್ದ. ಕ್ಯಾಲಂಡ್ರಿನಿ ಮತ್ತು ಕ್ರೇಮರ್-ಇವರುಗಳ ಅನ್ಯೋನ್ಯ ಸಂಬಂಧ ಹೇಗಿತ್ತೆಂದರೆ ಇವರನ್ನು ಅವರ ಮಿತ್ರರು ಕ್ಯಾಸ್ಟರ್ ಮತ್ತು ಪೊಲ್ಲಕ್ಸ್ ಎಂದು ಕರೆಯುತ್ತಿದ್ದರು. ಗಣಿತಶಾಸ್ತ್ರದಲ್ಲಿ ಹೊಸತನವನ್ನು ತರಲು ಇವರಿಗೆ ಲ್ಯಾಟಿನ್ ಭಾಷೆಯನ್ನು ಬಳಸುವುದರ ಬದಲು ಫ್ರೆಂಚನ್ನು ಬಳಸಲು ಅವಕಾಶವೀಯಲಾಯಿತು. ಅಲ್ಲಿನ ವಿದ್ಯಾರ್ಥಿಗಳಿಗೆ ಕ್ಯಾಲಂಡ್ರಿನಿ ಬೀಜಗಣಿತವನ್ನೂ ಕ್ರೇಮರ್ ಖಗೋಳಶಾಸ್ತ್ರವನ್ನೂ ಕಲಿಸಿದರು. 1734ರಲ್ಲಿ ಕ್ಯಾಲಂಡ್ರಿನಿಗೆ ತತ್ತ್ವಶಾಸ್ತ್ರದ ಪ್ರಾಧ್ಯಾಪಕನ ಹುದ್ದೆಯೂ ಕ್ರೇಮರನಿಗೆ ಗಣಿತಶಾಸ್ತ್ರದ ಪೀಠಾಧ್ಯಕ್ಷನ ಸ್ಥಾನವೂ ದೊರೆತವು. ಕ್ಯಾಲಂಡ್ರಿನಿ ಸರ್ಕಾರೀ ವೃತ್ತಿಯನ್ನು ಕೈಗೊಂಡಾಗ ಕ್ರೇಮರನನ್ನು ವಿಜ್ಞಾನವಿಭಾಗದ ಪ್ರಾಧ್ಯಾಪಕನನ್ನಾಗಿ ಮಾಡಲಾಯಿತು (1750). ತನ್ನ ನಿತ್ಯಜೀವನದಲ್ಲೂ ವ್ಯಾಸಂಗವಿಷಯಗಳಲ್ಲೂ ಕ್ರೇಮರನಿಗಿದ್ದ ಆಸಕ್ತಿಗಳು ಹೆಚ್ಚಿದ್ದು ಅವನ ಕಾರ್ಯಚಟುವಟಿಕೆಗಳು ಬಹುಮುಖವಾಗಿದ್ದವು. ಒಂದು ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ತತ್ತ್ವಶಾಸ್ತ್ರದ ಉಪಯೋಗದ ವಿಚಾರ ಮುಂತಾದ ವಿಷಯಗಳ ಮೇಲೆ ಈತನ ಅನೇಕ ಬರೆಹಗಳಿವೆ.

	ಲಂಡನಿನ ರಾಯಲ್ ಸೊಸೈಟಿಯ ಸದಸ್ಯತ್ವವೂ ಸೇರಿದಂತೆ ಕ್ರೇಮರನಿಗೆ ಅನೇಕ ಸಂಘ-ಸಂಸ್ಥೆಗಳಿಂದ ಗೌರವ ಲಭಿಸಿತು. ಬರ್ಲಿನ್, ಲೈಯನ್ಜ್, ಮಾಂಟಿಪೀಲ್ಯರುಗಳ ಅಕೆಡಮಿಗಳ ಪ್ರಶಸ್ತಿಗಳೂ ಬೋಲೋನ್ಯಾ ಇನ್‍ಸ್ಟಿಟ್ಯೂಟಿನ ಪ್ರಶಸ್ತಿಯೂ ಇವನಿಗೆ ಬಂದುವು. ಕ್ರೇಮರ್ ಸೂತ್ರವಿಧಿ (ನೋಡಿ- ಕ್ರೇಮರ್-ಸೂತ್ರವಿಧಿ) ಮತ್ತು ಕ್ರೇಮರ್ ಅಸಂಗತೋಕ್ತಿಗಳು (ಪ್ಯಾರಡಾಕ್ಸಸ್) ಜನಪ್ರಿಯವಾಗಿರುವಂಥ ಎರಡು ವಿಷಯಗಳು.								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ